Current Date 25 Aug, 2026

ದ್ವಾರಕೀಶ್ ಅವರಿಂದ ಖರೀದಿಸಿದ ಮನೆಗೆ ಒಮ್ಮೆಯೂ ಕಾಲಿಡದ ರಿಷಬ್ ಶೆಟ್ಟಿ..!

ಕುಂದಾಪುರದವರಾದರೂ ಬೆಂಗಳೂರಿಗೆ ಬಂದು ಕಾಲೇಜು ಮುಗಿಸಿ, ಅದರ ಜೊತೆ ಜೊತೆಗೆ ರಂಗಭೂಮಿಯ ನಂಟಿಗೆ ಬಿದ್ದವರು ರಿಷಬ್ ಶೆಟ್ಟಿ. ಕನ್ನಡದ ಸಿನಿಮಾಗಳನ್ನು ಏಕತಾನತೆಯಿಂದ ಹೊರತರಬೇಕು ಎಂಬ ಕನಸಿನೊಂದಿಗೆ ಕನ್ನಡ ಚಿತ್ರರಂಗಕ್ಕೆ ಬಂದ ರಿಷಬ್ ಇವತ್ತು ಜಗತ್ಪ್ರಸಿದ್ದಿಯನ್ನು ಪಡೆದುಕೊಂಡಿದ್ದಾರೆ. ಆದರೆ .. ಈ ಹೆಸರು ಏಕಾಏಕಿ ಬಂದಿದ್ದಲ್ಲ. ಹಗಲಿರುಳು ಎನ್ನದೇ ಸಿನಿಮಾವನ್ನೇ ಧ್ಯಾನಿಸಿ ಬೆವರು ಸುರಿಸಿದ ಪರಿಣಾಮ ರಿಷಬ್ ಇವತ್ತು ಈ ಸ್ಥಾನದಲ್ಲಿ ಇದ್ದಾರೆ.

ಸದಾ ಹೊಸತನವನ್ನೇ ಪ್ರಯತ್ನಿಸುವ ರಿಷಬ್ ಶೆಟ್ಟಿ ಕೇವಲ ನಾಯಕ, ನಿರ್ದೇಶಕ ಮಾತ್ರ ಅಲ್ಲ ಚುರುಕುತನ, ವ್ಯಾವಹಾರಿಕ ಚತುರತೆ ಹೊಂದಿರುವ ಪ್ರತಿಭೆಯೂ ಹೌದು. ಕಲಾತ್ಮಕ ಚೌಕಟ್ಟಿನ ಸರ್ಕಾರಿ ಶಾಲೆಯಂತಾ ಸಿನಿಮಾವನ್ನೂ ಜನ ಮುಗಿಬಿದ್ದು ನೋಡುವಂತೆ ಮಾಡಿ ಗೆಲ್ಲಿಸಿದ ಹೆಗ್ಗಳಿಕೆಯನ್ನೂ ಹೊಂದಿರುವ ರಿಷಬ್ ಶೆಟ್ಟಿ, ಆರೇಳು ಕಿರುಚಿತ್ರಗಳನ್ನು ಜೋಡಿಸಿಟ್ಟು ಕಥಾ ಸಂಗಮವಾಗಿಸಿ ವ್ಯಾಪಾರವನ್ನೂ ಕುದುರಿಸಿದವರು. ಇನ್ನೂ ಲಾಕ್‌ ಡೌನ್‌ ಸಂದರ್ಭದಲ್ಲಿ ಇಪ್ಪತ್ನಾಲ್ಕು ಜನರನ್ನು ಒಂದು ಕಡೆ ಗುಡ್ಡೆ ಹಾಕಿಕೊಂಡು ʻಹೀರೋʼ ಸಿನಿಮಾ ಮಾಡಿ ಸೈ ಅನಿಸಿಕೊಂಡ ಈ ಅಸಾಧಾರಣ ಪ್ರತಿಭಾವಂತರು ಇವರು.