"ಶೆಡ್ಡಿಗಲ್ಲ ಕಣೋ ಸ್ಟುಡಿಯೋಗೆ"; ಬಹುಭಾಷಾ ನಟ ಪ್ರಕಾಶ್ ರಾಜ್ ಕಾಮೆಂಟ್ ವೈರಲ್
ವಿಚಿತ್ರ ಕಾರಣಕ್ಕೆ ಬೆಂಗಳೂರಿನ ಪಟ್ಟಣಗೆರೆ ಶೆಡ್ಕುಖ್ಯಾತಿ ಪಡೆದಿದೆ. ರೇಣುಕಾಸ್ವಾಮಿಯನ್ನು ಇಲ್ಲೇ ಕೂಡಿ ಹಾಕಿ ಚಿತ್ರಹಿಂಸೆ ಕೊಟ್ಟು ಕೊಲ್ಲಲಾಗಿತ್ತು. ಈ ಪ್ರಕರಣದಲ್ಲಿ ನಟ ದರ್ಶನ್, ಪ್ರೇಯಸಿ ಪವಿತ್ರಾ ಗೌಡ ಸೇರಿದಂತೆ ಹಲವು ಆರೋಪಿಗಳು ಜೈಲು ಸೇರುವಂತಾಗಿದೆ. ವಿಚಾರಣಾಧೀನ ಖೈದಿಗಳಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೇಜ್ ಕಳುಹಿಸಿದ್ದ ಕಾರಣಕ್ಕೆ ಆತನನ್ನು ಅಪಹರಿಸಿ ಪಟ್ಟಣಗೆರೆ ಶೆಡ್‌ಗೆ ಕರೆತರಲಾಗಿತ್ತು. ನಟ ದರ್ಶನ್ ಸೂಚನೆ ಮೇರೆಗೆ ರೇಣುಕಾಸ್ವಾಮಿಯನ್ನು ಪುಸಲಾಯಿಸಿ ಆರೋಪಿಗಳು ಬೆಂಗಳೂರಿಗೆ ಕರೆ ತಂದಿದ್ದರು ಎಂದು ಹೇಳಲಾಗುತ್ತಿದೆ. ಆರೋಪಿಗಳ ಪೈಕಿ ಒಬ್ಬನಾದ ವಿನಯ್ ಸೋದರ ಮಾವನ ಒಡೆತನದ ಶೆಡ್ ಅದು.