Current Date 25 Aug, 2026

ಶ್ರೀಗೌರಿ' ಧಾರಾವಾಹಿಯ ಕಾರ್ತಿಕ್ ಅತ್ತಾವರ್ ಕಿರುಚಿತ್ರ ನಿರ್ದೇಶಕರೂ ಹೌದು

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಶ್ರೀಗೌರಿ'ಯೂ ಕೂಡಾ ಒಂದು. ವಿಭಿನ್ನ ರೀತಿಯ ಕಥಾಹಂದರದ ಜೊತೆಗೆ ಪಾತ್ರವರ್ಗದ ಮೂಲಕವೂ ಕಿರುತೆರೆ ವೀಕ್ಷಕರ ಮನ ಸೆಳೆದಿದೆ 'ಶ್ರೀಗೌರಿ' ಧಾರಾವಾಹಿ. ಇನ್ನು 'ಕಮಲಿ' ಧಾರಾವಾಹಿಯ ಕಮಲಿ ಖ್ಯಾತಿಯ ಅಮೂಲ್ಯ ಗೌಡ ನಾಯಕಿ ಶ್ರೀಗೌರಿಯಾಗಿ ಕಾಣಿಸಿಕೊಂಡಿದ್ದಾರೆ. ನಾಯಕ ಅಪ್ಪುವಾಗಿ ಕಾರ್ತಿಕ್ ಅತ್ತಾವರ್ ಬಣ್ಣ ಹಚ್ಚುತ್ತಿದ್ದಾರೆ.

ತಮ್ಮ ಸಹಜ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ಕಾರ್ತಿಕ್ ಅತ್ತಾವರ್ ಅವರಿಗೆ ಕಿರುತೆರೆ ಹೊಸದೇನಲ್ಲ‌. ಸುಮಾರು ಒಂಭತ್ತು ವರ್ಷಗಳ ಹಿಂದೆ ಈಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಯಶೋಧೆ' ಧಾರಾವಾಹಿಯಲ್ಲಿ ಇವರು ನಾಯಕನಾಗಿ ನಟಿಸಿದ್ದರು. ವಿನೋದ್ ವಿ ದೊಂಢಾಳೆ ಅವರ ನಿರ್ದೇಶನದಲ್ಲಿ ಪ್ರಸಾರವಾಗುತ್ತಿದ್ದ 'ಯಶೋಧೆ' ಧಾರಾವಾಹಿಯಲ್ಲಿ ನಾಯಕ ಆದಿತ್ಯನಾಗಿ ನಟಿಸಿದ್ದ ಕಾರ್ತಿಕ್ ಅತ್ತಾವರ್ ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದೇ ಇಲ್ಲ.