ಕನ್ನಡ ಚಿತ್ರರಂಗ ಒಂದು ಚಿಕ್ಕ ಮನೆ. ಈ ಮನೆಯಲ್ಲಿ ಅಲ್ಲೊಂದು..ಇಲ್ಲೊಂದು ಭಿನ್ನಾಭಿಪ್ರಾಯಗಳಿವೆ. ಮಿಕ್ಕಂತೆ ಎಲ್ಲರೂ ಪರಸ್ಪರ ಪ್ರೀತಿ ಮತ್ತು ವಿಶ್ವಾಸದಿಂದ ಇದ್ದಾರೆ. ಆದರೆ ಈ ವಿಚಾರವನ್ನು ಅರಿಯದ ಅನೇಕರು ಅಭಿಮಾನದ ಸೋಗಿನಲ್ಲಿ ಮಾಡಬಾರದ ಅನಾಚಾರವನ್ನೆಲ್ಲ ಮಾಡುತ್ತಿದ್ದಾರೆ. ಟ್ರೋಲು .. ಕಿಂಡಲ್ಲು .. ಸ್ಟಾರ್ ವಾರು .. ಎಂದೆಲ್ಲ ಜೇನುಗೂಡಿನಂತೆ ಇರುವ ಮನೆಯನ್ನು ಒಡೆದು ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಫ್ಯಾನ್ ವಾರ್ ಎಂಬ ಹೆಸರಿನಲ್ಲಿ ಮನೋ ರೋಗಿಯಂತೆ ವರ್ತನೆ ಮಾಡುತ್ತಾರೆ. ಇದಕ್ಕೆ ಹತ್ತಾರು ಉದಾಹರಣೆಗಳು ಕನ್ನಡ ಚಿತ್ರರಂಗದಲ್ಲಿವೆ. ಸಮಾಧಾನದ ವಿಚಾರ ಎಂದರೆ ನಮ್ಮಲ್ಲಿ ಅನೇಕ ಸ್ಟಾರ್‌ಗಳಿಗೆ ಈ ಹುನ್ನಾರದ ಅರಿವು ಇದೆ. ನಮ್ಮ ನಮ್ಮಲ್ಲಿಯೇ ತಂದಿಡುವ ಕೆಲಸವನ್ನು ಇವರೆಲ್ಲ ಮಾಡುತ್ತಿದ್ದಾರೆ ಎನ್ನುವುದು ಅವರಿಗೆ ಗೊತ್ತಿದೆ. ಇದಕ್ಕೆ ಇನ್ನೊಂದು ಪುರಾವೆ ಎನ್ನುವಂತೆ ಶ್ರೀಮುರಳಿ ಪರಿಸ್ಥಿತಿಯನ್ನು ನಾಜೂಕಾಗಿ ನಿಭಾಯಿಸಿದ್ದಾರೆ. ತಾಳ್ಮೆಯನ್ನು ಕಳೆದುಕೊಳ್ಳದೇ ಪ್ರೀತಿಯಿಂದ ಮಾತನಾಡುವ ಮೂಲಕ ನಾವೆಲ್ಲ ಚೆನ್ನಾಗಿಯೇ ಇದ್ದೇವೆ ಎನ್ನುವ ಸಂದೇಶವನ್ನು ಇನ್ನೊಮ್ಮೆ ರವಾನೆ ಮಾಡಿದ್ದಾರೆ.